ಆಧುನಿಕ, ಆಧುನಿಕತೆ-
	ಈ ಪದಗಳು ಹೆಚ್ಚಾಗಿ ಅನ್ವಯಿಸುವುದು ಚಿತ್ರಣ, ಶಿಲ್ಪ, ವಾಸ್ತುಶಿಲ್ಪ ಮೊದಲಾದ ಕಲೆಗಳಿಗೆ, ಸಾಹಿತ್ಯದಲ್ಲೂ ಇವುಗಳ ಪ್ರಸಾರವುಂಟು. ಆದರೆ ಪ್ರಭಾವ ಕಡಿಮೆಯೆಂದೇ ಹೇಳಬೇಕು. ಆಧುನಿಕ (ಮಾಡರ್ನ್) ಕಲೆ ಎಂದರೆ ನಮ್ಮ ಕಾಲದಲ್ಲಿ ಹೊರಬಂದ ಕಲೆ. ಸಮಕಾಲೀನ ಕಲೆ ಎಂಬಷ್ಟೇ ಅರ್ಥವಲ್ಲ; ತನ್ನ ಮುಖ್ಯ ಲಕ್ಷಣಗಳಲ್ಲಿ ಹಿಂದಣ ಕಲೆಗಿಂತ ಸ್ಪಷ್ಟವಾಗಿ ಬೇರೆಯಾದದ್ದು, ಈಗಿನ ಪರಿಸ್ಥಿತಿಗೂ ಸಂಸ್ಕøತಿಯ ವಿಕಾಸದ ಈಚಿನ ಮಜಲಿಗೂ ಅನುರೂಪವಾಗಿ ಹೊಂದಿಕೊಂಡಿದ್ದು. ಹಾಗಾದರೆ, ಯಾವುದು ಆಧುನಿಕಯುಗವೆಂಬ ಪ್ರಶ್ನೆಗೆ ನೇರವಾದ ಮತ್ತು ಸರ್ವರೂ ಅಂಗೀಕರಿಸಬಲ್ಲ ಉತ್ತರ ಕೊಡುವುದಕ್ಕೆ ಆಗದಿದ್ದರೂ ಸುಮಾರು ಐವತ್ತು ವರ್ಷಗಳ ಇತ್ತೀಚಿನ ಸಮಯ ಎನ್ನಬಹುದು.

	ಸಾಂಪ್ರದಾಯಿಕವಾದ ವಿಧಾನಗಳನ್ನೆಲ್ಲ ಗುಡಿಸಿ ಒಗೆದು, ನವೀನವಿಧಾನಗಳನ್ನು ಬಳಕೆಗೆ ತರುವುದು ಆಧುನಿಕತೆಯ (ಮಾಡರ್ನಿಸಂ) ಒಂದು ಗುರುತು. ಆ ಪ್ರಮಾಣದಿಂದ ಪರಿಶೀಲಿಸಿದರೆ, 19ನೆಯ ಶತಮಾನದ ಕೆಲವು ಚಿತ್ರಗಾರರು ಆಧುನಿಕರಿಗೆ ಮುಂದಾಳುಗಳಾಗುತ್ತಾರೆ ಅಥವಾ ಮುನ್ಸೂಚಕರಾಗುತ್ತಾರೆ (ನೋಡಿ- ಅಗ್ರಗಾಮಿ). ಅಲ್ಲಿನವರೆಗೂ ಪುರಾತನ ಗ್ರೀಕ್, ರೋಮನ್ ಸನ್ನಿವೇಶಗಳ ಹಿನ್ನೆಲೆಯಲ್ಲೊ ಬೈಬಲ್‍ನ ಸನ್ನಿವೇಶಗಳ ಹಿನ್ನೆಲೆಯಲ್ಲೊ ಪೌರಾಣಿಕ ಸ್ತ್ರೀಪುರುಷರ ಮತ್ತು ದಿವ್ಯವ್ಯಕ್ತಿಗಳ ಆಗುಹೋಗುಗಳನ್ನು ಚಿತ್ರಿಸುವುದು ವಾಡಿಕೆಯಾಗಿತ್ತು. ಸಮಕಾಲೀನ ಶ್ರೀಮಂತರ ಭಾವಚಿತ್ರಗಳನ್ನು ತಯಾರಿಸುವಾಗಲೂ ಉಡುಪು ಸ್ಥಳ ಆವರಣವೆಲ್ಲವೂ ಪ್ರಾಚೀನ ರೀತಿಯದೇ ಆಗಿರುತ್ತಿತ್ತು. 1830ರಿಂದ ಈಚೆಗೆ ಬಂದ, ಕೂರ್ಬೆ, ಸಿಜಾನ್, ವಾನ್‍ಗೊ (ಗಿಚಿಟಿ ಉoಞh) ಮೊದಲಾದವರು ವಾಸ್ತವಿಕ ದೃಶ್ಯಗಳನ್ನೂ ವ್ಯಕ್ತಿಗಳನ್ನೂ ಮೂಲಾಧಾರ ಮಾಡಿಕೊಂಡು ವರ್ಣಕೃತಿಗಳನ್ನು ರಚಿಸಿ ಕ್ರಾಂತಿಯನ್ನು ಉಂಟುಮಾಡಿದರು. ಆದರೂ ಹಳೆಯ ಸಂಪ್ರದಾಯ ಅಳಿಸಿಹೋಗಲಿಲ್ಲ.

	ಹಿಂದಣದನ್ನು ಕೈಬಿಟ್ಟ ಮಾತ್ರಕ್ಕೆ ಆಧುನಿಕತ್ವ ಸಿದ್ಧಿಸಲಿಲ್ಲ ಎಂಬ ಶಂಕೆ 1910ರಿಂದ ಈಚೆಗೆ ಎದ್ದು ಬಲಗೊಂಡು, ಲಲಿತಕಲೆಗಳ ಉದ್ದೇಶವನ್ನೂ, ಸ್ವರೂಪವನ್ನೂ ಇನ್ನೂ ಹೆಚ್ಚಾಗಿ ಪಲ್ಲಟಗೊಳಿಸಿತು. ನಮ್ಮ ಕಾಲಮಾನದ ಲಾಂಛನಗಳೆಂದರೆ ಯಂತ್ರಗಳ ಹೆಚ್ಚಳ, ನುಡಿಯಲ್ಲಿ ಆತುರ, ನಡೆಯಲ್ಲಿ ವೇಗ, ಆಚಾರವ್ಯವಹಾರಗಳಲ್ಲಿ ನವ್ಯತೆ-ಇತ್ಯಾದಿ ಸಡಗರಗಳಷ್ಟೆ. ಆದ್ದರಿಂದ ಒಡವೆ, ವಸ್ತು, ವಸ್ತ್ರ, ವಸತಿವಾಹನ ಯಾವುದೇ ಆಗಲಿ ಕೇವಲ ಲಾವಣ್ಯಕ್ಕೋಸ್ಕರ ಅದಕ್ಕೆ ಪ್ರಶಸ್ತಿಯನ್ನು ಕೊಡಲಾಗುವುದು. ಸಮರ್ಪಕ ಉಪಯುಕ್ತತೆಯಿಂದಲೂ, ಪ್ರಗತಿಯ ಸೂಚನೆಯಿಂದಲೂ ಅದು ಮಾನ್ಯವಾಗತಕ್ಕದ್ದು. ಇದು ಆಧುನಿಕರ ಜೀವನನೇಮ. ವಾಸ್ತುಶಿಲ್ಪಿ ಒಬ್ಬನ ವಿವರಣೆಯಂತೆ ಗೃಹವೆನ್ನುವುದು ಬದುಕು ಸಾಗಿಸಲು ಅನುಕೂಲವಾದ ಯಂತ್ರ. ಆಡಳಿತದ ಕಚೇರಿಗೆ ಅಲಂಕೃತವಾದ ಕಂಬ. ವಿಶಾಲವಾದ ಅಂಗಳಗಳು ಬೇಡ. ಕಾರ್ಖಾನೆಗಳಿಗೆ ತೆರಸಾಲೆ, ದಿವಾನಖಾನೆಗಳು ಅನಗತ್ಯ. ಇದು ಮನಶ್ಯಾಸ್ತ್ರ ವಿಶೇಷವಾಗಿ ಬೆಳೆದು ಹಬ್ಬಿರುವ ಯುಗ. ಅದರ ಒತ್ತಡದಿಂದ ಅಂತರಾಳದ ಸುಪ್ತಚೇತನಕ್ಕೂ ಗುಪ್ತ ಪ್ರಚೋದನೆಗೂ ಸಂಬಂಧಿಸಿದಂತೆ ಕಲೆಯ ವ್ಯಾಪಾರವನ್ನು ಹವಣಿಸುವ ಪ್ರಯತ್ನ ಹಲವಾರು ತೆರಗಳಲ್ಲಿ ನಡೆದಿದೆ.

	ಲಲಿತಕಲೆಗಳಲ್ಲಿ ಒಂದಾದ ಸಾಹಿತ್ಯದ ಮೇಲೂ ಆಧುನಿಕತೆಯ ಛಾಯೆ ಬಿದ್ದಿದ್ದರೆ ಅದೇನೂ ಅಚ್ಚರಿಯಲ್ಲ. ಆದರೆ ಇತರ ಕಲೆಗಳ ಮೇಲಿನಷ್ಟು ಆ ಛಾಯೆ ದಪ್ಪವಲ್ಲ. ಕಾದಂಬರಿ, ನಾಟಕ, ಪ್ರಬಂಧ, ಸಣ್ಣಕಥೆ ಇತ್ಯಾದಿ ಸಾಹಿತ್ಯ ಪ್ರಭೇದಗಳು ಹೊಸ ಅಂಶವನ್ನು ಸ್ವೀಕರಿಸಿ ಅಷ್ಟಿಷ್ಟು ಬದಲಾವಣೆ ತೋರಿದರೂ ಮೂಲ ರೂಪದಿಂದ ಅವು ಬಹುದೂರ ಸರಿದಿಲ್ಲ. ಪದ್ಯಕಾವ್ಯದಲ್ಲಿ ಮಾರ್ಪಾಟು ಕಣ್ಣುಕುಕ್ಕುವಷ್ಟು ಕಾಣಬರುತ್ತಿದೆ. ಹಿಂದಣ ಕಥನರೀತಿಯೂ ಛಂದಸ್ಸೂ ಕವಿಸಮಯವೂ ಹಿಂದೆಬಿದ್ದಿವೆ. ಸಂಕ್ಷಿಪ್ತತೆ, ವ್ಯಂಗ್ಯ, ಮರ್ಯಾದೆ, ನಾಟಕೀಯತೆ, ವಿರೋಧಗಳ ಮಿಲನ, ತೊಡಕುಗಳ ಸರಣಿ-ಮುಂತಾದವುಗಳಿಂದ ಬರವಣಿಗೆ ಕಷ್ಟಗ್ರಾಹ್ಯವಾಗಿದೆ. ಕೆಲವು ಕವಿಗಳ ಗೀತಕಾವ್ಯವಂತೂ ಅತ್ಯಾಧುನಿಕವಾಗಿದೆ. 

	ಸಾಹಿತ್ಯ ವಿಮರ್ಶೆಗೂ ಹಿಂದಣ ಕ್ಲ್ಯಾಸಿಕಲ್, ರೋಮ್ಯಾಂಟಿಕ್, ಇಂಪ್ರೆಷನಿಸ್ಟಿಕ್-ಇತ್ಯಾದಿ ಕ್ರಮಗಳಿಂದ ವಿಭಿನ್ನವಾಗುವ ಆಕಾಂಕ್ಷೆ ಬಲವಾಗಿದೆ. ಈಚಿನ ವಿಮರ್ಶೆಯ ಕೆಲವು ಸಿದ್ಧಾಂತಗಳು ಇವು : ಕವಿಯ ಸ್ವಭಾವಕ್ಕೂ ವೈಯಕ್ತಿಕ ಜೀವನಕ್ಕೂ ಅವನ ಲೇಖನಕ್ಕೂ ಏನೇನೂ ಸಂಬಂಧವಿಲ್ಲ; ಶಬ್ದಕೃತಿ ಒಂದೊಂದಕ್ಕೂ ತನ್ನದೇ ಆದ ಸ್ವತಂತ್ರ ವ್ಯಕ್ತಿತ್ವ ಇದ್ದೇ ಇರಬೇಕು; ಕಾವ್ಯ ಕಾವ್ಯವಾಗಿರತಕ್ಕದ್ದೇ ಹೊರತು ಮತ್ತಾವ ಉದ್ದೇಶವೂ ಅದಕ್ಕೆ ಇರಕೂಡದು; ಕಾವ್ಯದ ಅರ್ಥವನ್ನು ಹುಡುಕುವುದು ವ್ಯರ್ಥ; ಕಾವ್ಯವೆಂಬುದು ಒಂದು ಕಾರ್ಯ. ಆ ಕಾರ್ಯವನ್ನು ನಾವು ಅನುಭವಿಸಬೇಕು; ರೂಪದ ವಿಮರ್ಶೆಯಲ್ಲಿ ಕಂದಾಚಾರದ ಪಾತ್ರ, ಕಥಾಸಂವಿಧಾನ, ಕವಿದರ್ಶನ ಮುಂತಾದುವನ್ನು ನಿರಾಕರಿಸಬೇಕು; ಕೃತಿಗೆ ಬೆಲೆಕಟ್ಟಲು ಹೋಗಬಾರದು, ಕೃತಿಕಾರನ ಪ್ರತಿಮಾಶಿಲ್ಪವನ್ನು ಸವಿದು ತೃಪ್ತರಾಗತಕ್ಕದ್ದು. ಈ ಬಗೆಯ ಅಭಿಪ್ರಾಯಗಳ ಸುರಿಮಳೆಯಿಂದಲೂ ವಾದ ಪ್ರತಿವಾದಗಳ ಘರ್ಷಣೆಯಿಂದಲೂ ಗೊಂದಲ ಅಧಿಕವಾಗಿದೆ. ಸಕಲ ವಿದ್ವಾಂಸರೂ ಒಪ್ಪಬಹುದಾದ ಆಧುನಿಕ ಸೂತ್ರ ಯಾವೊಂದೂ ಫಲಿತವಾಗಿಲ್ಲ. ಸ್ಥೂಲವಾಗಿ ವರ್ಣಿಸಬೇಕಾದರೆ, ಆಧುನಿಕವೆನಿಸಿಕೊಳ್ಳುವ ವಿಮರ್ಶೆ ಉದ್ದಕ್ಕೂ ಕಠಿಣ ಪಾರಿಭಾಷಿಕ ಪದಗುಚ್ಛಗಳ ನೆಯ್ಗೆ. ಆಧುನಿಕತೆಯೇ ಉದ್ಯೋಗವಾಗುಳ್ಳ ಪಂಡಿತರು-ಮುಖ್ಯವಾಗಿ ವಿದ್ಯಾನಿಲಯಗಳ ಪ್ರಾಧ್ಯಾಪಕರು-ಆ ದುಪ್ಪಟಿಯನ್ನು ಹೊದೆಯಬಹುದು, ಹೊರಬಹುದು. ಎಂದರೆ, ಆಧುನಿಕ ವಿಮರ್ಶೆ ಸಾಮಾನ್ಯ ವಿದ್ಯಾವಂತರ ಕೈಗೆ ನಿಲುಕುವಂತಿಲ್ಲ. ಹೆಚ್ಚೆಂದರೆ ವಿಪರೀತಮತಿಗಳಿಗೆ ಮೀಸಲಾದ ಸಾರಸ್ವತ ಪ್ರಕ್ರಿಯೆಯಾಗಿದೆ.     										
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ